ಕೊಪರ್ನಿಕಸ್, ನಿಕೊಲಾಸ್ 
 1473-1543. ಪೋಲೆಂಡಿನ ಖಗೋಳ ವಿಜ್ಞಾನಿ. ಜನನ ಫೆಬ್ರವರಿ 19, 1473 ಪೋಲೆಂಡಿನ ಥಾರ್ನ್ ಪಟ್ಟಣದಲ್ಲಿ. ಈತನ ಪೂರ್ವಜರು ಪೋಲೆಂಡಿನಲ್ಲಿ ನೆಲೆಸಿದ್ದ ಜರ್ಮನರು. ಎಳವೆಯಲ್ಲೇ ಕೊಪರ್ನಿಕಸ್ ತನ್ನ ತಂದೆಯನ್ನು ಕಳೆದುಕೊಂಡು ಬಿಷಪ್ ಆಗಿದ್ದ ಚಿಕ್ಕಪ್ಪನ ಆಸರೆಯಲ್ಲಿ ಬೆಳೆದ.  ಕ್ರಾಕೋ ನಗರದಲ್ಲಿ ಗಣಿತವನ್ನು ವ್ಯಾಸಂಗ ಮಾಡಿ, ಅನಂತರ ಇಟಲಿಯ ಬೊಲೋನಾದಲ್ಲಿ ಕ್ರೈಸ್ತ ಚರ್ಚಿನ ಕಾನೂನನ್ನೂ ಖಗೋಳಶಾಸ್ತ್ರವನ್ನೂ ಪಾದುವಾದಲ್ಲಿ ವೈದ್ಯಶಾಸ್ತ್ರವನ್ನೂ ವ್ಯಾಸಂಗಮಾಡಿದ. ರೋಮ್ ನಗರದಲ್ಲಿ ಗಣಿತವನ್ನೂ ಖಗೋಳ ಶಾಸ್ತ್ರವನ್ನೂ ಕೆಲವು ಕಾಲ ಕಲಿಸಿ ಪ್ರಷ್ಯಾದ ಫ್ರೌವೆನ್‍ಬರ್ಗ್‍ಗೆ ವಾಪಸಾಗಿ ಅಲ್ಲಿಯ ಕೆಥೀಡ್ರಲಿನಲ್ಲಿ ಪಾದ್ರಿಯಾಗಿ ನೆಲೆಸಿದ. ಆಗ ಪ್ರಚಾರದಲ್ಲಿದ್ದ ಭೂಕೇಂದ್ರವಾದವನ್ನು ಈತ ನಿರಾಕರಿಸಿ ಎಲ್ಲ ಗ್ರಹಗಳೂ ಸೂರ್ಯನ ಪರಿಭ್ರಮಿಸುತ್ತವೆಂದೂ ಅವುಗಳ ಪೈಕಿ ಭೂಮಿ ಒಂದೆಂದೂ ಸಾರಿದ. ಆದ್ದರಿಂದ ಕೊಪರ್ನಿಕಸ್ ಸೂರ್ಯಕೇಂದ್ರವಾದವನ್ನು ಪ್ರತಿಪಾದಿಸಿದ ಖಗೋಳಜ್ಞನೆಂದು ಖ್ಯಾತಿ ಪಡೆದಿದ್ದಾನೆ. ಇದಕ್ಕೆ ಸಹಕಾರಿಯಾಗಿ ಭೂಮಿ ತನ್ನ ಅಕ್ಷದ ಸುತ್ತ ಆವರ್ತಿಸುತ್ತದೆಂದೂ ನಕ್ಷತ್ರಗಳು ನಮ್ಮಿಂದ ಅಗಾಧ ದೂರಗಳಲ್ಲಿವೆಯೆಂದೂ ಈತ ಘೋಷಿಸಿದ. ವಿಷುವದ್ಬಿಂದುಗಳ ಅಪ್ರದಕ್ಷಿಣೆ ಮತ್ತು ಇದು ಹೇಗೆ ಋತುಗಳಿಗೆ ಕಾರಣವಾಗುತ್ತದೆಂಬುದನ್ನೂ ಈತ ತನ್ನ ಡಿ ಅರ್ಬಿಯಂ ಸೋಲೆಸ್ಟಿಯಂ ರಿವೊಲ್ಯೂಷನಿಬಸ್ ಗ್ರಂಥದಲ್ಲಿ ವಿವರಿಸಿದ್ದಾನೆ. ಇಷ್ಟಾದರೂ ಗ್ರಹಕಕ್ಷೆಗಳೆಲ್ಲ ಸಂಪೂರ್ಣವೃತ್ತಗಳೆಂದು ನಂಬಿ ಈತ ವೃತ್ತ ಮತ್ತು ಅಧಿವೃತ್ತಗಳ ವಾದವನ್ನೂ ಸಮರ್ಥಿಸಿದ್ದಾನೆ. ಈತನ ಗ್ರಂಥ 1530ರ ಹೊತ್ತಿಗೆ ಸಿದ್ಧವಾಗಿದ್ದರೂ 1540ಕ್ಕೆ ಮುಂಚೆ ಅದರ ಪ್ರಕಟಣೆಗೆ ಇವನು ಒಪ್ಪಲಿಲ್ಲ. ಕಡೆಯಲ್ಲಿ ಅದು ಪ್ರಕಟವಾದದ್ದು 1543ರಲ್ಲಿ ನಿಕೊಲಾಸ್ ಮರಣಶಯ್ಯೆಯಲ್ಲಿದ್ದಾಗ (ಮರಣ:ಮೇ.24, 1543). ಕ್ಯಾಥೊಲಿಕ್ ಚರ್ಚ್ ಕೂಡಲೇ ಗ್ರಂಥಕ್ಕೆ ಬಹಿಷ್ಕಾರ ಮುದ್ರೆ ಹಾಕಿತು. 			 (ನೋಡಿ- ಕೊಪರ್ನಿಕಸ್-ಸಿದ್ಧಾಂತ)  		
(ಆರ್.ಎಲ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ